Admin Jan 12, 2018

ಪುತ್ತೂರು: ನಮ್ಮ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಹೊರಬರುವಾಗ ಉದ್ಯೋಗ ಹುಡುಕುವವರಾಗಿರಬಾರದು. ಬದಲಾಗಿ ಉದ್ಯೋಗದಾತರಾಗಿ ಕಾಣಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ಒದಗಿಸುತ್ತಿವೆಯಾದರೂ ನಮ್ಮಲ್ಲಿನ ಉತ್ಕೃಷ್ಟತೆಯನ್ನು ಅರಿಯುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಭಾರತ ಕೇಂದ್ರಿತವಾದ ವಿಚಾರಧಾರೆಗಳು ಬೆಳೆಯಲಾರಂಭಿಸಿವೆ. ಮೇಕ್ ಇನ್ ಇಂಡಿಯ ಕಲ್ಪನೆಗಳು ಭಾರತವನ್ನು ಬಲಿಷ್ಟಗೊಳಿಸಲಾರಂಭಿಸಿವೆ. ನಮ್ಮ ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗಾಗಿ ಶ್ರಮಿಸುವುದರ ಮುಖೇನ ಅಂತಿಮವಾಗಿ ರಾಷ್ಟ್ರ ನಿರ್ಮಾಣದ ಕಾಯಕದಲ್ಲಿ ತೊಡಗಬೇಕು ಎಂದು ನಾಗಾಲ್ಯಾಂಡ್‌ನ ರಾಜ್ಯಪಾಲ ಪಿ.ಬಿ.ಆಚಾರ್ಯ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾದ ವಿವೇಕಾನಂದ ಜಯಂತಿ ಆಚರಣೆ, ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯ ಉಚಿತ ತಾಂತ್ರಿಕ ತರಬೇತಿ ಹಾಗೂ ಗ್ರಾಮವಿಕಾಸ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸಂಘದ ಪ್ರೇರಣೆ, ಅನೇಕ ಗಣ್ಯರ ಪ್ರೇರಣೆಯಿಂದ ಭಾರತ ಪ್ರಪಂಚಮುಖದಲ್ಲಿ ಸದೃಢವಾಗಿ ಮುನ್ನುಗ್ಗಲಾರಂಭಿಸಿದೆ. ಇದಕ್ಕೆ ಪೂರಕವಾದ ಗ್ರಾಮ ವಿಕಾಸದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ತೊಡಗಿರುವುದು ಶ್ಲಾಘನೀಯ. ಪ್ರತಿಯೊಬ್ಬ ಮನುಷ್ಯನೂ ಒಂದು ಅದ್ಭುತ ಕೃತಿ. ಹಾಗಾಗಿ ವ್ಯಕ್ತಿಯನ್ನು ಅಧ್ಯಯನ ಮಾಡುವುದು, ಆತನ ಬಗೆಗೆ ತಿಳಿದುಕೊಳ್ಳುವುದು ಅತ್ಯಂತ ಮಹತ್ವದ ಸಂಗತಿ. ಈ ಬಗೆಗಿನ ಜ್ಞಾನವನ್ನು ನೀಡುವಂತಹ ಶಿಕ್ಷಣ ನಮ್ಮ ದೇಶದಲ್ಲಿತ್ತು. ಆದರೆ ಬ್ರಿಟಿಷರ ಕಾರಣದಿಂದಾಗಿ ನಮಗೆ ನಮ್ಮ ವಿಚಾರಗಳನ್ನು ಅರಿಯುವ, ನಮ್ಮಲ್ಲಿನ ಪ್ರಕೃತಿ, ಸಮುದ್ರಗಳ ಆಳ ಅಗಲವನ್ನು ಅರಿತುಕೊಳ್ಳುವ ಶಕ್ತಿ ಕಳೆದುಹೋಯಿತು ಎಂದು ನುಡಿದರು.

ತಾನು ರಾಜ್ಯಪಾಲನಾದಾಗ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ರಾಜ್ಯಗಳ ಸಭೆ ಕರೆದಿದ್ದರು. ಆ ಸಭೆಯಲ್ಲಿ ಪ್ರತಿ ರಾಜ್ಯದಲ್ಲೂ ತಳಮಟ್ಟದ ಜನರಿಗೆ ಮುದ್ರಾ ಯೋಜನೆಯನ್ನು ತಲಪುವಂತೆ ಮಾಡಿ ನಿಗದಿತ ಸಂಖ್ಯೆಯ ಉದ್ಯಮಿಕಗಳನ್ನು ಹುಟ್ಟುಹಾಕುವಂತೆ ಸಲಹೆ ನೀಡಿದರು. ಹೀಗೆ ಪ್ರತಿ ರಾಜ್ಯದಲ್ಲೂ ಆರ್ಥಿಕ ಶಕ್ತಿಗಳು ಅನಾವರಣಗೊಂಡಾಗ ದೇಶ ಸುಭದ್ರವಾಗುತ್ತದೆ. ದೇಶವನ್ನು ಪ್ರಾಪಂಚಿಕವಾದ ಶಕ್ತಿಯನ್ನಾಗಿಸುವ ಅಪೇಕ್ಷೆ ಹೊತ್ತವರು ಅನೇಕರು ಇಲ್ಲಿದ್ದಾರೆ. ಅವರನ್ನೆಲ್ಲ ಒಂದುಗೂಡಿಸುವ ಕಾರ್ಯ ಆಗಬೇಕಿದೆ. ಎಲ್ಲರಲ್ಲೂ ಅಮೋಘವಾದ ಚಿಂತನೆ, ಯೋಚನೆಗಳಿವೆ. ಅವುಗಳೆಲ್ಲವೂ ಜಾರಿಗೆ ಬಂದಾಗ ಉದ್ದೇಶಿತ ವಿಚಾರ ಸಾಕಾರಗೊಳ್ಳುತ್ತದೆ. ಅಷ್ಟಕ್ಕೂ ನಮ್ಮ ರಾಷ್ಟ್ರವನ್ನು ನಾವೇ ಸಶಕ್ತಗೊಳಿಸಬೇಕಲ್ಲದೆ ಮತ್ತೊಬ್ಬರಲ್ಲ ಎಂದರು.ದಿಕ್ಸೂಚಿ ಭಾಷಣ ಮಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸೀತಾರಾಮ ಕೆದಿಲಾಯ ಮಾತನಾಡಿ ಯಾರು ಎಲ್ಲರಿಗಾಗಿ ಬದುಕುತ್ತಾರೋ ಅವರು ನಿಜವಾಗಿ ಬದುಕುತ್ತಾರೆ. ಯಾರು ತನಗಾಗಿ ಬದುಕುತ್ತಾರೋ ಅವರು ಸಾಯುತ್ತಾರೆ.

ಈ ಬಗೆಗಿನ ವಿವೇಕವನ್ನು ತುಂಬುವ ವಿಚಾರಗಳಿಗೆ ಶಿಕ್ಷಣ ಎಂದು ಹೆಸರು. ನಾನು ನಿನಗಾಗಿ ಬದುಕುತ್ತೇನೆಂಬ ಕಲ್ಪನೆಯಲ್ಲಿ ಬದುಕುವುದಕ್ಕೆ ಮಾನವನ ಬದುಕು ಎಂದು ಕರೆಯುತ್ತೇವೆ. ಆದರೆ ಸುತ್ತಮುತ್ತಲಿನವರಿಂದ ದೇವರಂಥ ಮನುಷ್ಯ ಎಂದು ಕರೆಸಿಕೊಂಡು ಬದುವುದು ಬದುಕಿನ ಸಾರ್ಥ್ಯಕ್ಯ ಎಂದು ಅಭಿಪ್ರಾಯಪಟ್ಟರು.ಪಶುವಿನಂತೆ ಬದುಕುವುದಕ್ಕೆ ಅಥವ ದಾನವರಂತೆ ಬದುಕುವುದಕ್ಕೆ ಯಾವ ಶಿಕ್ಷಣವೂ ಬೇಕಿಲ್ಲ. ಆದರೆ ಮಾನವರಂತೆ ಹಾಗೂ ದೇವಮಾನವರಂತೆ ಬದುಕಲು ಉತ್ಕೃಷ್ಟವಾದ ಶಿಕ್ಷಣ ಬೇಕು. ಅಂತಹ ಶಿಕ್ಷಣ ಜಾರಿಯಾದಾಗ ಭಾರತ ಮತ್ತೊಮ್ಮೆ ದೈವಭೂಮಿಯಾಗುತ್ತದೆ. ಭಾರತದ ಕಸುವಿರುವುದು ಗ್ರಾಮಗಳಲ್ಲಿ. ಅಂತಹ ಗ್ರಾಮೀಣ ಭಾರತವನ್ನು ಎತ್ತರಿಸುವ ಮಂದಿ ಇಂದು ನಮಗೆ ಬೇಕಾಗಿದ್ದಾರೆ. ಆ ಬಗೆಗಿನ ಸಂಕಲ್ಪ ಮಾಡುವ ಯುವಜನತೆಯ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ,ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಉರಿಮಜಲು ಕೆ ರಾಮ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ನ.ಸೀತಾರಾಮ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಉಪಸ್ಥಿತರಿದ್ದರು.

Leave a comment.

Your email address will not be published. Required fields are marked*