Admin Jan 12, 2018

ಭಟ್ಕಳ: ತಾಲೂಕಿನ ಬೆಳಲಖಂಡ, ಗುಳ್ಮೆ ರಸ್ತೆಯ ಅಕ್ಕಪಕ್ಕದಲ್ಲಿ ಸುಮಾರು ೨೦೦ ಮೀ. ದೂರದವರೆಗೆ ಕಸ ಹಾಗು ತ್ಯಾಜ್ಯವಸ್ತುಗಳು ಕೊಳೆತು ನಾರುತ್ತಿದ್ದು, ತ್ಯಾಜ್ಯ ವಸ್ತುಗಳಿಂದ ಈ ಭಾಗದ ಸ್ಥಳಿಯ ನಿವಾಸಿಗಳಿಗೆ ರೋಗ ರುಜನಿಗಳ ಭಯದಲ್ಲಿಯೇ ಬದುಕಬೇಕಾದ ಹೀನಾಯ ಸ್ಥಿತಿ ಎದುರಾಗಿದೆ.
ಇತ್ತೀಚಿಗೆ ನಗರದ ಎಲ್ಲಾ ಭಾಗದಲ್ಲಿಯೂ ರಸ್ತೆ ಅಕ್ಕಪಕ್ಕ ಕಸವೂ ಕಂಡು ಬರುತ್ತಿದ್ದು, ಕಸ ವಿಲೇವಾರಿ ಪುರಸಭೆಯಿಂದ ಆಗುತ್ತಿದ್ದರು ಸಹ ಸ್ವಚ್ಛತೆಯ ಕಾರ್ಯದಲ್ಲಿ ವಿಫಲರಾಗಿದ್ದಾರೆ ಎನ್ನಬಹುದು. ಇಲ್ಲಿನ ನಗರದ ಗುಳ್ಮೆ, ಬೆಳಲಖಂಡ ಮಾರ್ಗವಾಗಿ ಸಾಗರ ರಸ್ತೆಗೆ ತಲುಪುವ ೨ ಕಿ.ಮೀ. ರಸ್ತೆಯನ್ನು ಹೊಸದಾಗಿ ನಿರ್ಮಾಣ ಮಾಡಿದ್ದು, ಈಗ ಈ ರಸ್ತೆಯೂ ೨೦೦ ಮೀ. ದೂರದ ರಸ್ತೆಯ ಇಕ್ಕೆಲದಲ್ಲಿ ಕಸವೇ ತುಂಬಿದೆ. ಇಲ್ಲಿನ ಸ್ಥಳಿಯರಿಗೆ ಈ ಕಸದ ರಾಶಿಯೂ ವಾಸಕ್ಕೆ ಸಮಸ್ಯೆಯೊಡ್ಡುತ್ತಿದ್ದು, ಪುರಸಭೆ ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.


ಈ ರಸ್ತೆಯೂ ಸಾಗರಕ್ಕೆ ತೆರಳುವ ಮುಖ್ಯ ಸಂಪರ್ಕ ಏರ್ಪಡಿಸುವ ರಸ್ತೆಯಲ್ಲಿ ಕಸ ಹಾಗು ತ್ಯಾಜ್ಯಗಳನ್ನು ತಂದು ಸುರಿಯಲಾಗುತ್ತಿದೆ. ಸರಿ ಸುಮಾರು ವರ್ಷಗಳಿಂದ ಈ ರಸ್ತೆಯಲ್ಲಿ ಕಸವೂ ಸುರಿಯಲ್ಪಡುತ್ತಿದ್ದು, ೫೦ಕ್ಕೂ ಅಧಿಕ ಮನೆಗಳು ಈ ಭಾಗದಲ್ಲಿವೆ. ಕಸ ಎಸೆಯುವ ಸ್ಥಳದ ಕೆಳಗೆ ಚಿಕ್ಕ ಗ್ರಾಮವಿದ್ದು ಸಾಕಷ್ಟು ಮನೆಗಳಿದ್ದು ಎಲ್ಲಾ ಕಸ ಗಾಳಿಗೆ ಮನೆಯ ಮೇಲೆ ಬೀಳುತ್ತಿವೆ. ಈ ಬಗ್ಗೆ ಸ್ಥಳಿಯ ಸಾರ್ವಜನಿಕರು ಪುರಸಭಾ ಅಧಿಕಾರಿಗಳ ಗಮನಕ್ಕೆ ತಂದರು ಕೂಡಾ ಅಧಿಕಾರಿಗಳು ತಮಗೂ ಈ ಸಮಸ್ಯೆಗು ತನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ.
ಈ ಕಸದ ರಾಶಿಯನ್ನು ಹಾಕುವ ಪುರಸಭಾ ಕಸದ ಡಂಪಿಂಗ್ ಯಾರ್ಡಗೂ ಅಲ್ಲಿಂದ ಕೇವಲ ಎರಡು ಕಿಲೋಮೀಟರ್ ದೂರದಲ್ಲಿದ್ದರು ಸಹ ಪುರಸಭೆಯಿಂದ ರಸ್ತೆಯ ಇಕ್ಕೆಲದಲ್ಲಿ ಹಾಕಲಾದ ಕಸವನ್ನು ತೆಗೆಯುವ ಕೆಲಸವನ್ನು ಮಾಡುತ್ತಿಲ್ಲ. ದಿನ ಬೆಳಗಾದರೆ ಸ್ಥಳಿಯ ಸಾರ್ವಜನಿಕರು ಈ ಕಸದ ಸಮಸ್ಯೆಯಿಂದ ತೊಂದರೆಯನ್ನು ಅನುಭವಿಸುತ್ತಿದ್ದು ದಿನ ನಿತ್ಯ ಈ ಮಾರ್ಗವಾಗಿ ಶಾಲಾ ಮಕ್ಕಳು ಕಾಲ್ನಡಿಗೆಯಿಂದ ಶಾಲೆಗೆ ತೆರಳುತ್ತಿದ್ದು, ಈ ಕಸದ ಸಮಸ್ಯೆಯಿಂದ ಶಾಲಾ ಮಕ್ಕಳಿಗೆ ರೋಗ ರುಜಿನುಗಳು ಹರಡುವ ಭಯವು ಪಾಲಕರಲ್ಲಿ ಕಾಡುತ್ತಿದೆ. ಹಾಗು ತ್ಯಾಜ್ಯದ ರಾಶಿಗೆ ಬೀದಿ ನಾಯಿ, ಜಾನುವಾರುಗಳು ಮುತ್ತಿಗೆ ಹಾಕಿ ತಿನ್ನುತ್ತಿವೆ. ಇದರಿಂದ ಶಾಲಾ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯಾಗುವ ಭೀತಿಯು ಕಾಡುತ್ತಿದೆ.
ಇಷ್ಟೆಲ್ಲಾ ಸಮಸ್ಯೆ ಕಾಡುತ್ತಿದ್ದರು ಪುರಸಭಾ ಅಧಿಕಾರಿಗಳು ಈ ಕಸದ ಸಮಸ್ಯೆಗೆ ಮುಕ್ತಿಯನ್ನು ಒದಗಿಸುವ ಮನಸ್ಸು ಮಾಡದಿರುವುದು ತುಂಬಾ ಖೇದದ ಸಂಗತಿಯಾಗಿದೆ.

Leave a comment.

Your email address will not be published. Required fields are marked*