Admin Jan 12, 2018

ಡೊಂಬಿವಲಿ : ನಾವು ಮೂಲತ: ಕೃಷಿಕರಾಗಿದ್ದು, ಕಷ್ಟದಿಂದ ಬೆಳೆದು ಬಂದವರು. ನಾವು ಬೆಳೆಯುವುದರೊಂದಿಗೆ ಕುಟುಂಬವನ್ನು ಬೆಳೆಸಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿಕೊಂಡವರು. ದಾನ ಧರ್ಮ ಅನ್ನುವುದು ಬಂಟ ಸಮಾಜದಲ್ಲಿ ರಕ್ತಗತವಾಗಿ ಬಂದಿದೆ. ಇದನ್ನು ಉಳಿಸಿಕೊಂಡು ಆರ್ಥಿಕವಾಗಿ ಹಿಂದುಳಿದವರನ್ನು ಮೇಲ್ದರ್ಜೆಗೇರಿಸುವ ಕೆಲಸವನ್ನು ಮಾಡೋಣ. ನಮ್ಮ ಹಿರಿಯರು ಉತ್ತಮ ಉದ್ದೇಶದೊಂದಿಗೆ ಸಂಘವನ್ನು ಕಟ್ಟಿದ್ದಾರೆ. ಆ ಉದ್ದೇಶವನ್ನು ಪ್ರಾದೇಶಿಕ ಸಮಿತಿ ಸಮಾಜದ ಪ್ರತಿಯೊಬ್ಬರ ಮನೆಯ ಬಾಗಿಲಿಗೆ ತಂದಿದೆ ಎನ್ನಲು ಸಂತೋಷವಾಗುತ್ತಿದೆ.


ಪ್ರತೀ ಸಲವೂ ಡೊಂಬಿವಲಿ ಪ್ರಾದೇಶಿಕ ಸಮಿತಿ, ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಾ ಬಂಟ ಸಮಾಜದ ಮನಗೆಲ್ಲುವಲ್ಲಿ ವಿಶೇಷ ಪಾತ್ರವನ್ನು ವಹಿಸಿದೆ. ಅದರೊಂದಿಗೆ ನಿರ್ಗಮನ ಕಾರ್ಯಾಧ್ಯಕ್ಷ ರಾಜೀವ್​ ಭಂಡಾರಿ ಅವರನ್ನು ಸನ್ಮಾನಿಸುವ ಕಾರ್ಯ ಇನ್ನೂ ವಿಶೇಷವಾಗಿ ಮಾಡಿದ್ದೀರಿ. ಅವರೊಂದಿಗೆ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಉತ್ತಮ ನಡೆ ನುಡಿಯ ವ್ಯಕ್ತಿಯನ್ನು ಆರಿಸಿದ್ದೀರಿ. ನಾವು ಮುಂಬಯಿ ಪಶ್ಚಿಮ ವಿಭಾಗದಲ್ಲಿ ಇನ್ನೊಂದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸೋಣಾ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಪಯ್ಯಡೆ ನುಡಿದರು.
ಅವರು ಜ.10ರಂದು ಬುಧವಾರ ಸಂಜೆ ನಡೆದ ಡೊಂಬಿವಲಿ ಪೂರ್ವದ ಸುಯೋಗ್​ ಹೋಟೆಲ್​ನ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾಗತಿಕ ಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್​ ಶೆಟ್ಟಿ ಮಾತನಾಡುತ್ತಾ ಇಂದು ಉತ್ತಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆಂಬ ಅತೀವ ಸಂತೋಷವಾಗುತ್ತಿದೆ. ನಮ್ಮ ಸಂಘದ ಮೂಲಕ ಸಮಾಜ ಬಾಂಧವರಿಗೆ ತೊಂದರೆಯಾಗದ ರೀತಿಯಲ್ಲಿ ಸಮಾಜವನ್ನು ಕಟ್ಟಿ ಬೆಳೆಸುವುದರೊಂದಿಗೆ ಸಂಘವನ್ನು ಇನ್ನಷ್ಟು ಬೆಳೆಸೋಣಾ ಎಂದರು.
ಬಂಟರ ಸಂಘದ ಮಾಜಿ ಅಧ್ಯಕ್ಷ ಟ್ರಸ್ಟಿ ಕರ್ನಿರೆ ವಿಶ್ವನಾಥ್​ ಶೆಟ್ಟಿ ಮಾತನಾಡುತ್ತಾ ಪ್ರಾದೇಶಿಕ ಸಮಿತಿಗಳು ಸಂಘದ ಕಾರ್ಯಕ್ರಮಗಳನ್ನು ಸಮಾಜ ಬಾಂಧವರು ಮನೆ ಮನೆಗಳಿಗೆ ತಲುಪಿಸುವ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ವಲಯದ ಸಮನ್ವಯಕರಾದ ದಿವಾಕರ ಶೆಟ್ಟಿ ಇಂದ್ರಾಳಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ನಿಕಟಪೂರ್ವ ಕಾರ್ಯಾಧ್ಯಕ್ಷೆ ಹರೀಣಿ ಶೆಟ್ಟಿ ಮಾತನಾಡಿದರು.
ಇದೇ ಸಂದರ್ಭದಲಲ್ಲಿ ರಾಜೀವ್​ ಭಂಡಾರಿ ನೂತನ ಕಾರ್ಯಾಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರೆ, ಹರಿಣಿ ಶೆಟ್ಟಿ, ಕೃಷ್ಣಿ ಶೆಟ್ಟಿಯವರಿಗೆ ಮಹಿಳಾ ವಿಭಾಗದ ಅಧಿಕಾರವನ್ನು ಹಾಗೂ ಮಹೇಶ್​ ಶೆಟ್ಟಿ ಸಜೀಪಗುತ್ತು ವಿಜಯ ಶೆಟ್ಟಿಯವರಿಗೆ ಯುವ ವಿಭಾಗದ ಅಧಿಕಾರವನ್ನು ಹಸ್ತಾಂತರಿಸಿದರು.
ನೂತನ ಕಾರ್ಯಾಧ್ಯಕ್ಷ ಕಲ್ಲಡ್ಕ ಕರುಣಾಕರ ಶೆಟ್ಟಿ, ಹಾಗೂ ನಿರ್ಗಮನದ ಕಾರ್ಯಾಧ್ಯಕ್ಷ ರಾಜೀವ್​ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.

Leave a comment.

Your email address will not be published. Required fields are marked*