Admin Jan 7, 2018

ಸುರತ್ಕಲ್ : ‘ದೀಪಕ್ ರಾವ್ ಮರಣವು ನಾಗರಿಕ ಸಮಾಜಕ್ಕೆ ಆಘಾತವನ್ನು ನೀಡಿದೆ. ಕೊಳದಲ್ಲಿ ಸಾವಿರಾರು ಕಮಲಗಳು ಇದ್ದರೂ ಗಜೇಂದ್ರನು ನಾರಾಯಣನಿಗೆ ಕಿತ್ತು ಕೊಟ್ಟ ಪಾವನ ಕಮಲದಂತೆ ದೀಪಕ್ ರಾವ್‌ನ ಬದಕು ಪಾವನವಾಗಿದೆ. ಸಮಾಜದಲ್ಲಿ ಸುವ್ಯವಸ್ಥೆ ನೆಲೆಯಾಗಬೇಕು ಎಂಬ ಯಾವ ಉದ್ದೇಶದಿಂದ ದೀಪಕ್ ರಾವ್ ಕೆಲಸ ಮಾಡಿ ಎಳೆಯ ವಯಸ್ಸಿನಲ್ಲಿ ಪ್ರಾಣವನ್ನು ಕಳೆದುಕೊಂಡಿದ್ದಾನೋ ಆ ಉದ್ದೇಶವನ್ನು ಸಫಲಗೊಳಿಸಲು ನಾವೆಲ್ಲಾ ಪ್ರಯತ್ನಿಸೋಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.

ಅವರು ಆದಿತ್ಯವಾರ ಸಂಜೆ ಕಾಟಿಪಳ್ಳದ ನಾರಾಯಣಗುರು ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಲಾಗಿದ್ದ, ದುಷ್ಕರ್ಮಿಗಳಿಗೆ ಬಲಿಯಾದ ದೀಪಕ್ ರಾವ್ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಹಿಂದು ಸಂಘಟನೆಯ ನಾಯಕ ಎಂ.ಬಿ.ಪುರಾಣಿಕ್ ಅವರು ಮಾತನಾಡಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ಯುವಕರು ಇದ್ದಕ್ಕಿದ್ದಂತೆ ಕೊಲೆಯಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

ವಾಮನ್ ಶೆಣೈಯವರು ಮಾತನಾಡುತ್ತಾ ಪ್ರಕೃತಿ ವಿರೋಧವಾದ ಘಟನೆಗಳು ಸಂಭವಿಸಿದಾಗ ಪ್ರಕೃತಿಯೇ ಅದಕ್ಕೆ ಸ್ಪಂದಿಸುತ್ತದೆ. ಪೊಲೀಸರು ದೀಪಕ್ ಕೊಲೆಗಾರರನ್ನು ಕೇವಲ ಎರಡು ಗಂಟೆಯಲ್ಲಿ ಬಂಧಿಸಿ ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ದೀಪಕ್ ಕೊಲೆಯ ಬಗ್ಗೆ ದೇಶ ದೇಶವೇ ಸ್ಪಂದಿಸುತ್ತಿದೆ. ರಾಜಧರ್ಮವನ್ನು ಮೆರೆಯುವವರು ತಮ್ಮ ಕರ್ತವ್ಯವನ್ನು ಮರೆಯದೆ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.

ದೀಪಕ್ ರಾವ್‌ನ ಗುರುಗಳಾಗಿದ್ದ ಸುಂದರ್ ಅವರು ಮಾತನಾಡಿ ತನ್ನ ವಿದ್ಯಾರ್ಥಿಯನ್ನು ನೆನಪಿಸಿಕೊಂಡು ಗದ್ಗದಿತರಾದರು. ಎಲ್ಲಾ ಕೆಲಸಗಳಲ್ಲೂ ಮುಂಚೂಣಿಯಲ್ಲಿ ಇರುತ್ತಿದ್ದ ದೀಪಕ್ ರಾವ್ ಸಾವಿನಲ್ಲೂ ಮುಂಚೂಣಿಗೆ ಬಂದದ್ದು ತೀರಾ ವಿಷಾದನೀಯ ಎಂದು ಅವರು ಕಂಬನಿ ಮಿಡಿದರು.
ಸ್ಥಳೀಯ ಕೋರ‍್ದಬ್ಬು ದೈವಸ್ಥಾನದ ಮುಖ್ಯಸ್ಥರಾದ ಹರೀಶ್ ಶೆಟ್ಟಿಯವರು ದೀಪಕ್ ರಾವ್ ಒಡನಾಟವನ್ನು ಸ್ಮರಿಸಿದರು.

ದೀಪಕ್ ಮನೆಯ ನೆರೆಮನೆಯವರಾದ ಶೈಲರವರು ದೀಪಕ್ ರಾವ್‌ರನ್ನು ನೆನಪಿಸಿಕೊಂಡು ಕಣ್ಣೀರಾದರು. ಉತ್ತಮ ಗುಣ ನಡತೆಯ ಹುಡುಗನನ್ನು ನಾವು ಕಳೆದುಕೊಂಡಿದ್ದೇವೆ ಎಂದು ವಿಷಾದಿಸಿದರು.

ದೀಪಕ್ ರಾವ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಮಾಡಲಾಯಿತು. ಅಪಾರ ಸಂಖ್ಯೆಯಲ್ಲಿ ಸೇರಿದ ವಿವಿಧ ಸಂಘಟನೆಗಳ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ದೀಪಕ್ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಶ್ರದ್ದಾಂಜಲಿ ಅರ್ಪಿಸಿದರು.

 

Leave a comment.

Your email address will not be published. Required fields are marked*