Admin Jan 4, 2018

ಮಂಗಳೂರು : ಗಣೇಶ ಕಟ್ಟೆ ನಿವಾಸಿ ದೀಪಕ್ ರಾವ್ ಕೊಲೆ ಯಾಕಾಯಿತು ಎಂಬ ವಿಚಾರವು ಈಗ ಬೆಳಕಿಗೆ ಬಂದಿದೆ. ಡಿಸೆಂಬರ್ ಮೂರರಂದು ಕಾಟಿಪಳ್ಳದ ಮೂರನೇ ಬ್ಲಾಕ್‌ನಲ್ಲಿರುವ ಕೋರ‍್ದಬ್ಬು ದೈವಸ್ಥಾನದ ವಾರ್ಷಿಕ ಕೋಲವು ನಡೆದಿತ್ತು. ಇದಕ್ಕಾಗಿ ಮುಖ್ಯ ರಸ್ತೆಯನ್ನು ಸಂಪರ್ಕಿಸುವಲ್ಲಿ ಇರುವ ದ್ವಾರದ ಬಳಿ ಕೇಸರಿ ಬಂಟಿಂಗ್ಸ್‌ಗಳನ್ನು ಅಳವಡಿಸಲಾಗುತ್ತಿತ್ತು.

ಇದೇ ಸಂದರ್ಭದಲ್ಲಿ ಈದ್ ಮಿಲಾದ್ ಹಬ್ಬ ಇದ್ದದ್ದರಿಂದ ಕೋರ‍್ದಬ್ಬು ದ್ವಾರದ ಸಮೀಪ ಮುಸ್ಲಿಮರು ಹಸಿರು ಬಣ್ಣದ ಬಂಟಿಂಗ್ಸ್ ಅಳವಡಿಸುತ್ತಿದ್ದರು. ಇದಕ್ಕೆ ಸಂಬಂಧಪಟ್ಟಂತೆ ವಾಗ್ಯುದ್ದ ನಡೆದಿತ್ತು. ಈ ಸಂದರ್ಭದಲ್ಲಿ ದೀಪಕ್ ರಾವ್ ಘಟನೆಯ ಸಂಪೂರ್ಣ ವಿಡಿಯೋ ಚಿತ್ರಣವನ್ನು ಮಾಡಿ ವಾಟ್ಸಾಫ್‌ಗೆ ಹಾಕಿದ್ದರು.
ಇದನ್ನು ಸಹಿಸದ ಕೆಲವು ಮಂದಿ ವಿಡಿಯೋ ಡಿಲಿಟ್ ಮಾಡುವಂತೆ ಒತ್ತಾಯಿಸಿದ್ದರು. ಇದನ್ನು ದೀಪಕ್ ರಾವ್ ಕ್ಯಾರೇ ಮಾಡಿರಲಿಲ್ಲ. ಈ ಬಗ್ಗೆ ದೀಪಕ್ ಕೆಲಸ ಮಾಡುತ್ತಿದ್ದ ಮೊಬೈಲ್ ಅಂಗಡಿಯ ಮಾಲಕ ಮಜೀದ್‌ಗೂ ದುಷ್ಕರ್ಮಿಗಳು ಎಚ್ಚರಿಕೆ ನೀಡಿದ್ದರು. ‘ನೀನು ಕೆಲಸ ಬಿಟ್ಟು ಬೇರೆ ಕೆಲಸ ನೋಡಿಕೋ, ನಿನ್ನ ಜೀವಕ್ಕೆ ಅಪಾಯ ಇದೆ ಎಂದು ದೀಪಕ್‌ಗೆ ಮಜೀದ್ ಹೇಳಿದ್ದರು. ಅದರಂತೆ ದೀಪಕ್ ಬೇರೆ ಕೆಲಸ ನೋಡಿದ್ದು ಮೊಬೈಲ್ ಅಂಗಡಿಯ ಕೆಲಸ ಬಿಡುವವನಿದ್ದ. ಆದರೆ ದುಷ್ಕರ್ಮಿಗಳು ಕಾದು ನಿಂತು ಮಜೀದ್‌ನ ಮೊಬೈಲ್ ಅಂಗಡಿಯ ಮುಂದೆಯೇ ದೀಪಕ್‌ನನ್ನು ಕೊಂದು ಹಾಕಿದ್ದರು. ಮಜೀದ್ ಮತ್ತು ಸ್ಥಳೀಯರು ಇದನ್ನು ತಡೆಯಲು ಯತ್ನಿಸಿದರೂ ಫಲ ನೀಡಲಿಲ್ಲ.

ಮಜೀದ್ ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದು ದೀಪಕ್ ಜತೆ ಆತ್ಮೀಯರಾಗಿದ್ದರು. ದೀಪಕ್ ಮೃತನಾದ ನಂತರ ಆತನ ಬಗ್ಗೆ ಹರಡಿಕೊಂಡ ಕೆಲವೊಂದು ಅಪಪ್ರಚಾರದ ಗಾಳಿ ಸುದ್ದಿಗಳನ್ನು ಮಜೀದ್ ಅಲ್ಲಗಳೆದು, ಆತ ಉತ್ತಮ ವ್ಯಕ್ತಿತ್ವದವನೆಂದು ಹೇಳಿದ್ದಾರೆ.

ದುಷ್ಕರ್ಮಿಗಳು ತಮ್ಮ ಮುಖವನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ಇಷ್ಟಪಡದೇ ಇದ್ದದ್ದರಿಂದ ದೀಪಕ್ ಚಿತ್ರೀಕಿಸಿದ್ದ ವಿಡಿಯೋ ಡಿಲಿಟ್ ಮಾಡಲು ಒತ್ತಾಯ ಮಾಡಿದ್ದರು. ಈಗ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿಬಿಟ್ಟಿದೆ.

ಕೆಲವು ಕಾರು ಚಾಲಕರು ಮಾಡಿದ ಸಾಹಸದಿಂದ ದುಷ್ಕರ್ಮಿಗಳ ಬಂಧನವಾಗಿದ್ದು ಕೊಲೆಗೆ ನಿಜವಾದ ಕಾರಣವೇನು? ಕೊಲೆಗಾರರು ಯಾವ ಸಂಘಟನೆಯವರು? ಯಾರೊಂದಿಗೆ ಅವರ ಸಂಬಂಧ ಇತ್ತು ಎಂಬುದು ಈಗ ಬಹಿರಂಗವಾಗಿದೆ. ಯಾರೋ ಕೊಲೆ ಮಾಡಿ ತಪ್ಪಿಸಿಕೊಂಡು ಕೆಲವು ದಿನಗಳ ಕಳೆದ ನಂತರ ಯಾರನ್ನೋ ಸರೆಂಡರ್ ಮಾಡಿಸಿ ತನಿಖೆಯ ದಿಕ್ಕು ತಪ್ಪಿಸುವ ಕಾರ್ಯಕ್ಕೆ ತಡೆ ಬಿದ್ದಿದೆ. ಈ ಕೊಲೆ ಪ್ರಕರಣದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರವು ಮುಜುಗರಕ್ಕೀಡಾಗಿರುವುದು ಕಂಡು ಬರುತ್ತಿದೆ. ಸಾಮಾಜಿಕ ತಾಣ ಮತ್ತು ಟಿವಿ ಮಾಧ್ಯಮಗಳಲ್ಲಿ ಈ ಬಗ್ಗೆ ಬಿಸಿ ಬಿಸಿಯಾದ ಚರ್ಚೆ ನಡೆಯುತ್ತಿದೆ.

ಪರಿಹಾರ ಚೆಕ್ ಹಸ್ತಾಂತರ :

ದೀಪಕ್ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿದ್ದ ದೀಪಕ್‌ನ ಮಿತ್ರರ ಕಣ್ಣು ತಪ್ಪಿಸಿ ಹಿಂಬಾಗಿಲಿನಿಂದ ಪೊಲೀಸರು ಗಣೇಶ್ ಕಟ್ಟೆಯ ಬಳಿ ಇರುವ ದೀಪಕ್ ಮನೆಗೆ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೆ ತಂದಾಗ ಸಾರ್ವಜನಿಕರು ಸೇರಿ ಮೃತದೇಹವನ್ನು ಇಳಿಸಲು ಬಿಡದೆ ಪ್ರತಿಭಟನೆ ಮಾಡಿದರು. ಮತ್ತೆ ಮೃದೇಹವನ್ನು ಎ.ಜೆ.ಆಸ್ಪತ್ರೆಗೆ ಕೊಂಡೊಯ್ಯಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗಣೇಶ್ ಕಟ್ಟೆಯ ಬಳಿ ಸಾವಿರಾರು ಜನರು ಜಮಾಯಿಸಿದ್ದರು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ಧಿಕ್ಕಾರ ಕೂಗಿದರು.


ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಥಳಕ್ಕೆ ಆಗಮಿಸಿ ದೀಪಕ್ ಹೆತ್ತವರನ್ನ ಸಂತೈಸಿದ್ದರು. ಪ್ರತಿಭಟನಾಕಾರರನ್ನ ಸಮಾಧಾನಿಸಿದರು. ಸರಕಾರ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ ರೂಪಾಯಿಗಳಂತೆ ಒಟ್ಟು ಹತ್ತು ಲಕ್ಷ ರೂಪಾಯಿಗಳ ಪರಿಹಾರವನ್ನು ಸಂಜೆಯ ಒಳೆಗೆ ಹಸ್ತಾಂತರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರೊಚ್ಚಿಗೆದ್ದ ಪ್ರತಿಭಟನಾಕಾರರು ಗೋ ಕಳ್ಳಸಾಗಾಟಗಾರ ಕಬೀರ್‌ಗೆ ಮೂವತ್ತು ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗಿತ್ತು. ಈಗ ಹತ್ತು ಲಕ್ಷ ರೂಪಾಯಿಗಳ ಪರಿಹಾರ ಯಾವ ನ್ಯಾಯ ಎಂದು ಧಿಕ್ಕಾರ ಕೂಗಿದರು. ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಕೆಲಸವನ್ನು ಮಾಡಿರುವುದಾಗಿ ತಿಳಿಸಿ ಇನ್ನೂ ಹೆಚ್ಚಿನ ಪರಿಹಾರಕ್ಕಾಗಿ ವರದಿಯನ್ನು ತಯಾರಿಸಿ ಸರಕಾರಕ್ಕೆ ನೀಡುವುದಾಗಿ ಭರವಸೆ ನೀಡಿದರು. ವಿಶ್ವಹಿಂದು ಪರಿಷತ್ ಮತ್ತು ಇತರ ನಾಯಕರು ಸಮಾಧಾನಿಸಿದ ನಂತರ ಮೃತದೇಹ ಇಳಿಸಲು ಸಾರ್ವಜನಿಕರು ಒಪ್ಪಿಗೆ ನೀಡಿದರು.

ಶವಯಾತ್ರೆಯು ಗಣೇಶಪುರ ದೇವಸ್ಥಾನ, ಚರ್ಚ್ ರೋಡ್ ಮಾರ್ಗವಾಗಿ ಕಾಟಿಪಳ್ಳದ ರುದ್ರಭೂಮಿಗೆ ಸಾಗಿ ಪಂಚಭೂತಗಳಲ್ಲಿ ಲೀನವಾಯಿತು.
ಸಂಜೆಯ ಹೊತ್ತಿಗೆ ಜಿಲ್ಲಾಧಿಕಾರಿ ಸಸಿಕಾಂತ್ ದೀಪಕ್ ಹೆತ್ತವರಿಗೆ ಹತ್ತು ಲಕ್ಷ ರೂಪಾಯಿಗಳ ಪರಿಹಾರ ಹಸ್ತಾಂತರಿಸಿದರು.

Leave a comment.

Your email address will not be published. Required fields are marked*