Admin Jan 4, 2018

ಸುರತ್ಕಲ್ : ಕಾಟಿಪಳ್ಳ ಗಣೇಶ್ ಕಟ್ಟೆ ನಿವಾಸಿ ದಿ. ರಾಮಚಂದ್ರ ಮತ್ತು ಪ್ರೇಮ ದಂಪತಿಗಳ ಪುತ್ರ ದೀಪಕ್ ರಾವ್ ಕೃಷ್ಣಾಪುರದ ಮೂಡಾಯಿಕೋಡಿ ಎಂಬಲ್ಲಿ ಅಬ್ದುಲ್ ಮಜೀದ್ ಎಂಬವರು ನಡೆಸುತ್ತಿದ್ದ ಮೊಬೈಲ್ ಅಂಗಡಿಯಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಗುರುವಾರ ಮಧ್ಯಾಹ್ನ ಕರೆನ್ಸಿ ಸಂಗ್ರಹಿಸಿ ಅಂಗಡಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ದೀಪಕ್‌ನನ್ನು ಕಾಟಿಪಳ್ಳ 2ನೇ ಬ್ಲಾಕ್ ಮಿಸ್ಬಾ ಕಾಲೇಜಿನ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ ಯದ್ವಾತದ್ವಾ ಹಲ್ಲೆ ನಡೆಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದರು. ರಕ್ತಸಿಕ್ತವಾದ ಬಟ್ಟೆಯನ್ನು ಕಾರಿನಲ್ಲೇ ಕಳಚಿ ಬದಲಾಯಿಸಿಕೊಂಡಿದ್ದರು.


ಈ ಸಂದರ್ಭದಲ್ಲಿ ಕಾರನ್ನು ಗಮನಿಸಿದ ವ್ಯಕ್ತಿಯೊಬ್ಬರು ಸುರತ್ಕಲ್ ಪೊಲೀಸರಿಗೆ ಸೂಚನೆ ನೀಡಿದ್ದರು. ಆರೋಪಿಗಳು ಕಾಟಿಪಳ್ಳ, ಪೆಡ್ಡಿಯಂಗಡಿ, ಸೂರಿಂಜೆ, ಶಿಬರೂರು ಮಾರ್ಗವಾಗಿ ಕಿನ್ನಿಗೋಳಿಗೆ ದೌಡಾಯಿಸಿದ್ದರು. ಪೊಲೀಸ್ ಅಧಿಕಾರಿಗಳು ಕಿನ್ನಿಗೋಳಿಯಲ್ಲಿ ಗಸ್ತು ನಿರ್ವಹಿಸುತ್ತಿದ್ದ ಪೊಲೀಸರಿಗೆ ಸೂಚನೆ ಕೊಟ್ಟರು. ಕಿನ್ನಿಗೋಳಿಯಲ್ಲಿ ಕಾರನ್ನು ನಿಲ್ಲಿಸುವಂತೆ ಸೂಚನೆ ಕೊಟ್ಟಿದ್ದರು. ಆದರೆ ಆರೋಪಿಗಳು ವಾಯುವೇಗದಲ್ಲಿ ಕಾರನ್ನು ಮುಂದಕ್ಕೆ ಕೊಂಡೊಯ್ದಿದ್ದರು. ಪೊಲೀಸರು ಬಾಡಿಗೆ ಕಾರಿನಲ್ಲಿ ಆರೋಪಿಗಳನ್ನು ಬೆನ್ನಟ್ಟಿದರು. ಸುರತ್ಕಲ್. ಬಜಪೆ, ಮುಲ್ಕಿ ಪೊಲೀಸರು ಈ ಮಾರ್ಗವಾಗಿ ದೌಡಾಯಿಸಿದರು.


ದಾಮಸ್ ಕಟ್ಟೆ, ಪಟ್ಟೆಕ್ರಾಸ್, ಕುದ್ರಿಪದವು, ನಿಡ್ಡೋಡಿ ಮೂಲಕ ಧೂಮಚಡವಿನಿಂದ ಎಡಪದವಿನ ಮಿಜಾರು ಗುತ್ತು ಗರಡಿಯ ಬಳಿ ಒಳದಾರಿಯಲ್ಲಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಆದರೆ ಅಲ್ಲಿದ್ದ ಮೋರಿಯೊಂದರಲ್ಲಿ ದುಷ್ಕರ್ಮಿಗಳ ಕಾರು ಸಿಲುಕಿಕೊಂಡಿತು. ಈ ಸಂದರ್ಭದಲ್ಲಿ ಪೊಲೀಸರು ಕಾರಿನ ಮೇಲೆ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಮೂಡುಬಿದಿರೆ, ಮುಲ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರನ್ನು ಸುತ್ತುವರಿದರು. ಕಾರಿನಿಂದ ಇಳಿದ ದುಷ್ಕರ್ಮಿಗಳು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಪೊಲೀಸರು ಬೆನ್ನಟ್ಟಿ ಹಿಡಿಯಲು ಯತ್ನಿಸಿದಾಗ ಅವರ ಮೇಲೆ ಓರ್ವ ದುಷ್ಕರ್ಮಿ ತಲವಾರು ಬೀಸಿದ್ದ. ಇದರಿಂದ ಇನ್ಸ್‌ಪೆಕ್ಟರ್ ಒಬ್ಬರು ಗಾಯಗೊಂಡರು. ಪೊಲೀಸರು ಬಂದೂಕಿನಿಂದ ಬೆದರಿಸಿ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿದರು.


ಗಾಯಾಳು ದುಷ್ಕರ್ಮಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು. ಉಳಿದವರನ್ನು ಅಜ್ಞಾತ ಸ್ಥಳದಲ್ಲಿ ತೀವ್ರ ವಿಚಾರಣೆ ನಡಸಲಾಗುತ್ತಿದೆ.

ಪ್ರಾಣದ ಹಂಗು ತೊರೆದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ಕಾರಿನ ಚಾಲಕ ಪೊಲೀಸರಿಗೆ ಸಹಾಯ ಮಾಡಿದ್ದು ಆತನ ಚಾಣಾಕ್ಷ್ಯತನವೂ ಪ್ರಶಂಸೆಗೆ ಪಾತ್ರವಾಗಿದೆ.

 

Leave a comment.

Your email address will not be published. Required fields are marked*