Admin Dec 22, 2017

ದ.ಕ.ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಸಮೀಪ ದೇವರ ಗುಂಡಿ ಜಲಪಾತ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿ ಪ್ರೇಮಿಗಳ ಆಕರ್ಷಕ ತಾಣವಾಗಿ ಎಲ್ಲರ ಗಮನ ಸೆಳೆಯುತ್ತಿದೆ.

 


ತಂಡೋಪ ತಂಡವಾಗಿ ದೇವರ ಗುಂಡಿ ಜಲಪಾತ ಸೊಬಗ ನೋಡಲು ವಿದ್ಯಾರ್ಥಿಗಳ ಗುಂಪು, ಇತರ ಪ್ರವಾಸಿ ಪ್ರೇಮಿಗಳು ದಿನ ನಿತ್ಯ ಇಲ್ಲಿಗೆ ಆಗಮಿಸುತ್ತಿದ್ದಾರೆ.


ಇಲ್ಲಿಗೆ ಬರುವ ಹಾದಿ ಹೇಗೆ ಎಂಬ ಕುತೂಹಲ ನಿಮಗಿರಬಹುದು. ಸುಳ್ಯ ತಾಲೂಕು ಕೇಂದ್ರಕ್ಕೆ ಬಂದು ಸುಳ್ಯ ಮಡಿಕೇರಿ ರಾಜ್ಯ ರಸ್ತೆಯಲ್ಲಿ 11 ಕಿ.ಮೀ ಪ್ರಯಾಣ ಬೆಳೆಸಿದ್ದಾಗ ಅರಂತೋಡು ಪೇಟೆ ಸಿಗುತ್ತದೆ.ಇಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯದ ದ್ವಾರ ಕಾಣಸಿಗುತ್ತದೆ. ಈ ದ್ವಾರದ ಮೂಲಕ ಸುಮಾರು ೫ ಕಿ.ಮೀ ಪ್ರಯಾಣ ಬೆಳೆಸಿದಾಗ ಶ್ರೀ ಮಲ್ಲಿಕಾರ್ಜುನ ದೇವಾಲಯ ಹಸಿರ ವನಸಿರಿಯ ಮಧ್ಯೆ ಕಂಗೊಳಿಸುತ್ತದೆ. ಇಲ್ಲಿಂದ ತೊಡಿಕಾನ – ಪಟ್ಟಿ ರಸ್ತೆಯಲ್ಲಿ 1800 ಮೀಟರ್ ದೂರ ಪ್ರಯಾಣಿಸಿದಾಗ ಖಾಸಗಿಯವರ ಅಡಿಕೆ ತೋಟದ ಮಧ್ಯೆ ಅತ್ಯಾಕರ್ಷಕವಾಗಿ 40 ಪೀಟ್ ಎತ್ತರದಿಂದ ಮತ್ಸ್ಯ ತೀರ್ಥ ಹೊಳೆ ಜಲಪಾತವಾಗಿ ಧುಮ್ಮಿಕ್ಕುತ್ತದೆ.


ಜಲಪಾತದ ಬಳಿ ತಲುಪುತ್ತಿದ್ದಂತೆ ದುಂಬಿಗಳ ಜೇಂಕಾರ, ಹಕ್ಕಿಗಳ ಚಿಲಿ ಪಿಲಿ ಇಂಚರ , ಕೋಗಿಲೆಗಳ ಗಾನ ಮನಸ್ಸಿಗೆ ಇನ್ನಷ್ಟು ಮುದ ನೀಡುತ್ತದೆ. ಜಲಪಾತದ ಸುತ್ತಮುತ್ತಲು ಸ್ವಾಭಾವಿಕ ಹವಾ ನಿಯಂತ್ರಣ ಪರಿಸರ, ಒಂದಷ್ಟು ಎತ್ತರದಿಂದ ನೀರು ಕೆಳಗೆ ಧುಮ್ಮಿಕ್ಕಿ ಹರಿಯುವಾಗ ನೀರಿನ ಮುತ್ತಿನ ಹನಿಗಳು ನಮಗರಿವಿಲ್ಲದಂತೆ ನಮ್ಮ ದೇಹವನ್ನು ಆವರಿಸಿಕೊಂಡು ಪೂರ್ಣ ದೇಹವೇ ಒದ್ದೆಯಾಗುವಂತೆ ಮಾಡುತ್ತದೆ.


ಮುಂಜಾನೆ ಮತ್ತು ಸಂಜೆ ಹೊತ್ತಲ್ಲಿ ಸೂರ‍್ಯನ ಕಿರಣಗಳು ಜಲಪಾತವನ್ನು ಸ್ಪರ್ಶಿಸಿದಾಗ ಜಲಪಾತದ ಬಳಿ ಕಾಣುವ ಕಾಮನ ಬಿಲ್ಲನ್ನು ನೋಡುವುದು ಇನ್ನೊಂದು ಸೊಬಗು. ಸುತ್ತಮುತ್ತ ತಂಪಾದ ಪ್ರದೇಶವಾದುದರಿಂದ ಇಲ್ಲಿಗೆ ಆಗಮಿಸುವವರಿಗೆ ಇಲ್ಲಿಂದ ಹೊರಡುವ ಮನಸೇ ಬಾರದು.


ನಿಮ್ಮ ಮನಸ್ಸಿಗೆ ಒಂದಷ್ಟು ರಿಲಾಕ್ಸ್ ಬೇಕೆಂದರೆ ಜಲಪಾತದ ಬಳಿ ಒಂದಷ್ಟು ಹೊತ್ತು ಕಾಲ ಕಳೆಯಬಹುದು. ಆದರೆ ಒಂದು ವಿಚಾರ. ಇಲ್ಲಿಗೆ ಭೇಟಿ ಕೊಟ್ಟು ಜಲಪಾತದ ಗುಂಡಿಗೆ ಯಾರು ಇಳಿಯುವಂತಿಲ್ಲ. ಇಳಿದರೆ ಜೀವಕ್ಕೆ ಅಪಾಯ ತಪ್ಪಿದ್ದಲ್ಲ.

ಇದಕ್ಕೆ ಸಂಬಂಧಿಸಿದಂತೆ ಜಲಪಾತದ ಬಳಿ ನಾಮಫಲಕವನ್ನು ಅಳವಡಿಸಲಾಗಿದೆ.

ನೀವು ಬರುವುದಾದರೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳಕ್ಕೆ ದೂರವಾಣಿ ಮೂಲಕ ತಿಳಿಸಿದರೆ ಅಲ್ಲಿ ಊಟೋಪಚಾರದ ವ್ಯವಸ್ಥೆ ಕೂಡಾ ಮಾಡಲಾಗುತ್ತದೆ. ಅಲ್ಲದೆ ಅತೀ ಪುರಾತನ ದೇವಾಲಯದ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ದರ್ಶನ ಭಾಗ್ಯವು ಲಭಿಸುತ್ತದೆ.
ದೂರವಾಣಿ ಸಂಖ್ಯೆ: 9483140142

Leave a comment.

Your email address will not be published. Required fields are marked*