Admin Dec 7, 2017

ಉಳ್ಳಾಲ: ಭಗವಾನ್ ಶ್ರೀರಾಮನನ್ನು ವರ್ಷಗಳಿಂದ ಕಟಕಟೆಯಲ್ಲಿ ನಿಲ್ಲಿಸುತ್ತಿರುವುದು ಖೇದಕರ ಸಂಗತಿ. ಮತ್ತೆ ವಿಚಾರಣೆಯನ್ನು ಮುಂದೂಡಲು ಪ್ರೇರೇಪಿಸುವ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್​ನಂತಹ ಹಿಂದೂ ಜನರೇ ಇದರಲ್ಲಿ ತೊಡಗಿಕೊಂಡಿರುವುದು ಹಿಂದು ಸಮಾಜದ ದುರಾದೃಷ್ಠ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.


ಅವರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಕುಂಪಲ ಹಿಂದು ಜಾಗರಣಾ ವೇದಿಕೆ ಓಂ ಶಕ್ತಿ ಘಟಕದ ಆಶ್ರಯದಲ್ಲಿ ಅಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವ ಅಂಗವಾಗಿ ನಡೆದ 8ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಅಯೋಧ್ಯೆ ಚಳವಳಿ ದೇಶದ ಇತಿಹಾಸಕ್ಕೆ ಬಹುದೊಡ್ಡ ಸವಾಲಾಗಿದೆ. ದೇಶದ ಹಿತ ಕಾಯುವ ಪಕ್ಷ ಆಡಳಿತಕ್ಕೆ ಬರಲು ಚಳವಳಿಯಿಂದ ಸಾಧ್ಯವಾಗಿದೆ. ಇದೀಗ ಆಡಳಿತ ಕೈಯಲ್ಲಿರುವ ಸಂದರ್ಭ ಅಯೋಧ್ಯೆಯಲ್ಲಿ ಪವಿತ್ರ ರಾಮಜನ್ಮಭೂಮಿ ರಚಿಸಿಯೇ ಸಿದ್ದ. ಅದಕ್ಕಾಗಿ ಹಿಂದು ಸಮಾಜ ಒಗ್ಗಟ್ಟಾಗುವ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಪೂರಕ. ಇಂತಹ ಶೌರ್ಯ ದಿವಸ್ ಆಚರಣೆ ದೇಶಾದ್ಯಂತ ದೇವಸ್ಥಾನ ಕಟ್ಟಲು ಅಡ್ಡಿಪಡಿಸುತ್ತಿರುವ ಎಲ್ಲರಿಗೂ ಉತ್ತಮ ಸಂದೇಶ ನೀಡಲಿ ಎಂದರು.


ದೇಶದಲ್ಲಿ ಯುವಸಮುದಾಯ ಆಧುನೀಕತೆಯತ್ತ ವಾಲುತ್ತಿರುವುದರಿಂದ ಜಡತ್ವ ಹೆಚ್ಚಾಗುತ್ತಿದೆ. ದೇಶದಲ್ಲಿ ಹಿಂದೂಗಳಿಗೆ ಬೆಲೆ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರು ಜಾರಿಗೆ ತಂದ ಒಡೆದು ಆಳುವ ನೀತಿ ಈಗಲೂ ಚಾಲ್ತಿಯಲ್ಲಿದೆ. ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ಇಂಡಿಯನ್ಸ್ ಅಂದರೆ ದರೋಡೆಕೋರು, ಕಳ್ಳರು ಎಂದು ಉಲ್ಲೇಖವಿದೆ. ಬ್ರಿಟೀಷರು ಇಟ್ಟಂತಹ ಹೆಸರನ್ನೇ ಈಗಲೂ ಪಾಲನೆಯಾಗುತ್ತಿದೆ. ಆಂಗ್ಲ ಭಾಷೆಯ ವಾಸ್ತವ ಪದಗಳನ್ನು ಅರಿಯುವಂತೆ ಮಾಡಿ ಮಕ್ಕಳನ್ನು ಸರಿದಾರಿಗೆ ತರುವ ಜವಾಬ್ದಾರಿ ಹಿರಿಯ ನಾಗರಿಕರದ್ದಾಗಿದೆ. ಅಯೋಧ್ಯೆಯಲ್ಲಿ ರಾಮ ದೇವಸ್ಥಾನ ನಿರ್ಮಾಣವಾದಲ್ಲಿ ದೇಶಕ್ಕೆ ಒಳಿತಾಗಲಿದೆ. ಯಾವ ಧರ್ಮೀಯರು ವಿರೋಧಿಸದೆ ಬೆಂಬಲಿಸಬೇಕಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದು ಮುಖಂಡ ಜಗದೀಶ್ ಆಳ್ವ ಕುವೆತ್ತಬೈಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ರಾಜೇಶ್ ಅಮ್ಟಾಡಿ, ಹಿಂ.ಜಾ.ವೇ ಜಿಲ್ಲಾ ಸಹಸಂಚಾಲಕ ಸಂದೀಪ್ ಶೆಟ್ಟಿ ಅಂಬ್ಲಮೊಗರು, ಹಿಂ.ಜಾ.ವೇ ಸುರತ್ಕಲ್ ನಗರ ಅಧ್ಯಕ್ಷ ಸತೀಶ್ ಮುಂಚೂರು, ಉದ್ಯಮಿ ಗುರುಪ್ರಸಾದ್, ಹಿಂದು ಮುಖಂಡ ಲೋಕೇಶ್ , ರಾಮ ಪ್ರಸಾದ್ ಎಕ್ಕೂರು, ವಿಶ್ವನಾಥ ಕೋಡಿಕೆರೆ, ಹಿಂ.ಜಾ.ವೇ ಕುಂಪಲ ಘಟಕ ಅಧ್ಯಕ್ಷ ಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ರಾಜೇಶ್ ಅಮ್ಟಾಡಿ ಇವರನ್ನು ಕುಂಪಲ ಓಂ ಶಕ್ತಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.


ಮನೋಜ್ ತೊಕ್ಕೊಟ್ಟು ಸ್ವಾಗತಿಸಿದರು. ಪ್ರವೀಣ್ . ಎಸ್. ಕುಂಪಲ ನಿರೂಪಿಸಿದರು. ಮನೋಹರ್ ಗಟ್ಟಿ ವಂದಿಸಿದರು.

 

 

Leave a comment.

Your email address will not be published. Required fields are marked*