Admin Nov 16, 2017

ಕಣ್ಣು ಹಾಯಿಸಿದಷ್ಟು ದೂರ ಮರಳ ಹಾಸು, ಅಲ್ಲಲ್ಲಿ ಪ್ರವಾಸಿಗರ ಅವಶ್ಯಕತೆಗಾಗಿ ನಿರ್ಮಿಸಿದ ಕುಟೀರ, ಸಾಹಸಪ್ರಿಯರಿಗೆ ಬೋಟಿಂಗ್ ಮಜಾ… ಮಕ್ಕಳಿಗೆ ಒಂಟೆ ಸವಾರಿಯ ಮೋಜು… ಪ್ರಣಯಿಗಳ ವಿಹಾರಕ್ಕೆ ಹೇಳಿ ಮಾಡಿಸಿದ ತಾಣ. ಮುಸ್ಸಂಜೆಯ ಹೊತ್ತಂತೂ ನೇಸರನ ಕೆಂಬಣ್ಣ ಇಲ್ಲಿ ನೆರೆದವರನ್ನು ಹೊಂಬಣ್ಣದಲ್ಲಿ ತೋಯಿಸುತ್ತದೆ. ಇದು ಮಂಗಳೂರಿನ ಹೆಗ್ಗುರುತು ಪಣಂಬೂರು ಬೀಚ್‌ನ ಕಿರು ಪರಿಚಯ. ಇಲ್ಲಿ ಸೂರ್ಯಾಸ್ತ ವೀಕ್ಷಿಸಲು ದೇಶ-ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ನಯನ ಮನೋಹರ ಪಣಂಬೂರು ಕಡಲ ತೀರ ವೀಕೆಂಡ್ ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದ್ದು ಇದೇ ಕಾರಣಕ್ಕೆ ಪ್ರವಾಸಿಗರ ಆಕರ್ಷಣೆಯನ್ನು ಉಳಿಸಿಕೊಂಡಿದೆ.

ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಪ್ರವಾಸಿಗರ ನೆಚ್ಚಿನ ತಾಣ. ಹರಿವ ನದಿ, ಧುಮ್ಮಿಕ್ಕಿ ಹರಿವ ಜಲಧಾರೆ, ಅಸಂಖ್ಯ ರಮಣೀಯ ಕಡಲತಡಿಗಳಿಂದ ತುಂಬಿದ ಸುಂದರ ಊರು. ಈ ಕಾರಣದಿಂದಲೇ ಇಂದಿಗೂ ವಾರಾಂತ್ಯದ ದಿನಗಳಲ್ಲಿ ಪಣಂಬೂರು ಬೀಚ್ ಕಿಕ್ಕಿರಿದು ತುಂಬುತ್ತದೆ. ಪ್ರವಾಸಿಗರು ಬೀಚ್‌ಗೆ ದಾಂಗುಡಿ ಇಡುವ ಕಾರಣ ಬೀಚ್ ರಂಗೇರುತ್ತದೆ. ಪ್ರವಾಸಿಗರ ಅನುಕೂಲಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನೂ ಪ್ರವಾಸೋದ್ಯಮ ಇಲಾಖೆ ಮಾಡಿದೆ. ಸುಡುವ ಬೇಸಿಗೆಯಿಂದ ಮುಕ್ತಿ ಪಡೆಯಲು ಬಯಸುವ ಪ್ರವಾಸಿಗರೇ ಚಿಂತೆ ಬಿಡಿ, ಪಣಂಬೂರು ಬೀಚ್‌ಗೆ ಭೇಟಿಕೊಡಿ.

ಪ್ರೇಮಿಗಳ ಫೇವರಿಟ್ ತಾಣ:
ಪಣಂಬೂರು ಬೀಚ್ ಜಿಲ್ಲೆಯ ಮಾತ್ರವಲ್ಲದೆ ಹೊರಜಿಲ್ಲೆ, ರಾಜ್ಯಗಳಿಂದ ಬರುವ ಪ್ರೇಮಿಗಳ ಫೇವರಿಟ್ ತಾಣ. ಇಲ್ಲಿಗೆ ದಿನಂಪ್ರತಿ ನೂರಾರು ಪ್ರೇಮಿಗಳು ಭೇಟಿ ನೀಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ಪ್ರೇಮಿಗಳ ದಂಡೇ ಸೇರಿರುತ್ತದೆ. ಮರಳು ಹಾಸಿನ ಮೇಲೆ ಲೋಕದ ಪರಿವೆಯೇ ಇಲ್ಲದಂತೆ ಪ್ರೇಮಿಗಳು ಕಡಲ ಒಡಲನ್ನೇ ದಿಟ್ಟಿಸುವ ಪರಿಯೇ ಸೊಬಗು. ಇಲ್ಲಿ ಕಡಲಿನ ಮಧ್ಯೆ ಬಂಡೆಗಲ್ಲು ಹಾಕಿ ನಿರ್ಮಿಸಿರುವ ಬ್ರೇಕ್‌ವಾಟರ್ ಪ್ರೇಮಿಗಳ ಏಕಾಂತ ವಿಹಾರಕ್ಕೆ ಸಾಥ್ ನೀಡುತ್ತದೆ.

ಟೇಸ್ಟಿ ಸೀಫುಡ್:
ಪಣಂಬೂರು ಬೀಚ್‌ನಲ್ಲಿ ಸ್ವಾದಿಷ್ಟ ಖಾದ್ಯಗಳನ್ನು ಪ್ರವಾಸಿಗರಿಗೆ ಉಣಬಡಿಸುವ ವ್ಯವಸ್ಥೆಯೂ ಇದೆ. ಬಂಗುಡೆ ಫ್ರೈ, ಅಂಜಲ್ ತವಾ, ಮಾಂಜಿ ಪುಳಿಮುಂಚಿ, ಬಣಲೆ ದೆಂಜಿ, ಎಟ್ಟಿ ರವಾ ಫ್ರೈ… ಹೀಗೆ ತುಳುವರ ಶೈಲಿಯ ಮೀನಿನ ವಿವಿಧ ಖಾದ್ಯಗಳನ್ನು ಒಮ್ಮೆ ಸವಿದವರು ಮತ್ತೆ-ಮತ್ತೆ ಇಲ್ಲಿಗೆ ಬರುತ್ತಾರೆ ಎಂದರೆ ಅತಿಶಯವಲ್ಲ.

ಬೋಟಿಂಗ್, ಕುದುರೆ-ಒಂಟೆ ಸವಾರಿ ಆಕರ್ಷಣೆ:
ಪಣಂಬೂರು ಬೀಚ್‌ನಲ್ಲಿ ಪ್ರವಾಸಿಗರಿಗಾಗಿ ಬೋಟಿಂಗ್, ಕುದುರೆ-ಒಂಟೆ ಸವಾರಿಯ ವ್ಯವಸ್ಥೆಯನ್ನು ಮಾಡಲಾಗಿದೆ. ಕಡಿಮೆ ದರದಲ್ಲಿ ಪ್ರವಾಸಿಗರು ಇವುಗಳ ಮಜಾ ಪಡೆಯಬಹುದು. ಇನ್ನು ಬಿಸಿ ಬಿಸಿ ಜೋಳದ ತೆನೆಯನ್ನು ಕಡಲ ತೀರದಲ್ಲೇ ತಿಂದು ಚಪ್ಪರಿಸಬಹುದು.

ಇರಲಿ ಎಚ್ಚರ:
ಪಣಂಬೂರು ಬೀಚ್‌ನಲ್ಲಿ ವಾರದ ಶನಿವಾರ ಮತ್ತು ಆದಿತ್ಯವಾರದಂದು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ನೀರಾಟಕ್ಕಿಳಿದು ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಪ್ರಮೇಯ ಹೆಚ್ಚುತ್ತಿದೆ. ಇದನ್ನು ತಡೆಯಲು ಬೀಚ್ ಅಭಿವೃದ್ಧಿ ಸಮಿತಿ ಇಲ್ಲಿ ಜೀವರಕ್ಷಕರನ್ನು ನೇಮಕ ಮಾಡಿದೆ. ಆದ್ದರಿಂದ ಪ್ರವಾಸಿಗರು ತಮ್ಮ ಎಚ್ಚರಿಕೆಯಲ್ಲಿ ತಾವಿದ್ದು ವಿಹಾರದ ಮಜಾ ಅನುಭವಿಸಲು ಯಾವುದೇ ಸಮಸ್ಯೆಯಿಲ್ಲ.

 

ಗಮನ ಸೆಳೆಯುವ ಬೀಚ್ ಉತ್ಸವ:
ಪಣಂಬೂರು ಬೀಚ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಇಲ್ಲಿ ಪ್ರತೀವರ್ಷ ನಡೆಯುವ ಬೀಚ್ ಉತ್ಸವ ಹಾಗೂ ಗಾಳಿಪಟ ಉತ್ಸವ. ಈ ವೇಳೆ ಇಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಕಾರಣ ಬೀಚ್‌ನಲ್ಲಿ ಜನಜಂಗುಳಿ ಏರ್ಪಡುತ್ತದೆ. ಸಾರ್ವಜನಿಕರಿಗೆ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸುವ ಜೊತೆಗೆ ಇಲ್ಲಿ ನಾಡದೋಣಿ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗುತ್ತಿದೆ.

ತಲುಪುವುದು ಹೇಗೆ?
ಪಣಂಬೂರು ಬೀಚ್ ವೀಕ್ಷಿಸಲು ಮಂಗಳೂರಿನಿಂದ ಸಿಟಿ, ಸರ್ವಿಸ್ ಬಸ್‌ಗಳ ಮೂಲಕ ಪಣಂಬೂರು ಬೀಚ್ ಜಂಕ್ಷನ್‌ಗೆ ಹೋಗಬಹುದು. ನಂತರ ಅಲ್ಲಿಂದ ರಿಕ್ಷಾವನ್ನು ಹಿಡಿದು ಬೀಚ್‌ಗೆ ತೆರಳಬಹುದು. ಮಂಗಳೂರಿನಿಂದ ಟ್ಯಾಕ್ಸಿ, ಕಾರುಗಳ ಮೂಲಕವೂ ಬೀಚ್‌ಗೆ ಹೋಗಿ ಸುತ್ತಾಡಿ ಬರಬಹುದಾಗಿದೆ. ಇಲ್ಲಿಂದ ನವಮಂಗಳೂರು ಬಂದರು ಹತ್ತಿರವಿದ್ದು. ಅನುಮತಿ ಪಡೆದು ಬಂದರು ವೀಕ್ಷಿಸಿ ತೆರಳಬಹುದಾಗಿದೆ.

ಎಲ್ಲಿಂದ ಎಷ್ಟು ದೂರ?
ಪಣಂಬೂರು ಬೀಚ್ ಮಂಗಳೂರಿನಿಂದ ಎಂಟು ಕಿ.ಮೀ. ದೂರದಲ್ಲಿದೆ. ಉಡುಪಿಯಿಂದ 85 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ 358 ಕಿ.ಮೀ. ದೂರದಲ್ಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ರೈಲು ಇಲ್ಲವೇ ಬಸ್ ಮೂಲಕ ಸಂಚಾರ ನಡೆಸಿ ನಂತರ ಬಸ್ ಇಲ್ಲವೇ ಟ್ಯಾಕ್ಸಿಯಲ್ಲಿ ಪ್ರಯಾಣ ಕೈಗೊಳ್ಳಬಹುದು.

ಶಶಿಧರ, ಬೆಳ್ಳಾಯರು

 

Leave a comment.

Your email address will not be published. Required fields are marked*