Admin Nov 7, 2017

ಒಂದೇ ಸಮನೆ ಸುರಿಯೋ ಮಳೆ ಅಲ್ಲಿ ಚಿತ್ತಾರ ಬಿಡಿಸಿರುತ್ತೆ, ಕಾಮನಬಿಲ್ಲು ಆಗಸದಲ್ಲಿ ಮಿಂಚಿ ಕಣ್ಮನ ತಣಿಸುತ್ತೆ, ರಸ್ತೆಯುದ್ದಕ್ಕೂ ಮುತ್ತಿಕ್ಕುವ ಮಂಜಿನ ಮಾಲೆ, ಇಕ್ಕೆಲಗಳಲ್ಲಿ ಧುಮ್ಮಿಕ್ಕಿ ಹರಿವ ಜಲಧಾರೆಗಳ ಹಿಂಡು, ಆ ಬಾನು ಈ ಭೂಮಿ ಒಂದಾಗಿ ಕಾಣೋ ಸ್ವರ್ಗಸದೃಶ ಪ್ರಕೃತಿ… ನೀವು ಇದನ್ನೆಲ್ಲ ಕಣ್ತುಂಬಿಕೊಳ್ಳಬೇಕಿದ್ದರೆ ಒಮ್ಮೆಯಾದರೂ ಮುಂಗಾರು ಬೆಂಬಿಡದೆ ಸುರಿವ ವೇಳೆಯಲ್ಲಿ ಚಾರ್ಮಾಡಿ ಘಾಟ್‌ನತ್ತ ಪಾದ ಬೆಳೆಸಬೇಕು.

ಚಾರ್ಮಾಡಿ ಘಾಟ್ ದೇಶದ ಅತ್ಯಂತ ಕಠಿಣ ಹಾಗೂ ರುದ್ರ ರಮಣೀಯ ಘಾಟ್‌ಗಳಲ್ಲಿ ಒಂದು. ಈ ಕಾರಣಕ್ಕಾಗಿಯೇ ಚಾರ್ಮಾಡಿ ಹೆಸರೆತ್ತಿದರೆ ಸಾಕು, ಪ್ರಕೃತಿ ಪ್ರೇಮಿಗಳ ಮನಸ್ಸು ಮುದಗೊಳ್ಳುತ್ತೆ. ಚಾರ್ಮಾಡಿ ಘಾಟ್ ಪ್ರಪಾತಗಳಿಂದ ಆವೃತ್ತವಾಗಿ ಎಷ್ಟೇ ಭಯಾನಕವಾಗಿದ್ರೂ ಒಂದು ರೌಂಡ್ ಹೊಡೆದ್ರೆ ಸಾಕು, ಮನಸು ಖುಷಿಯಿಂದ ಜೀಕಿದ ಅನುಭವ. ಹೀಗಾಗಿ ವೀಕೆಂಡ್‌ಗಳಲ್ಲಿ ಚಾರ್ಮಾಡಿ ಘಾಟ್ ಸುತ್ತಲು, ಇಲ್ಲಿ ಸುತ್ತಮುತ್ತ ಇರೋ ಚಾರಣ ತಾಣಗಳನ್ನು ಸಂದರ್ಶಿಸಲು ಯುವಜನತೆ ಭೇಟಿ ಕೊಡುತ್ತಾರೆ.

ಎಲ್ಲಿದೆ ಚಾರ್ಮಾಡಿ ಘಾಟ್:
ಚಾರ್ಮಾಡಿ ಘಾಟ್ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗಡಿಭಾಗದಲ್ಲಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ ಪೇಟೆಯನ್ನು ದಾಟಿ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ಚಾರ್ಮಾಡಿ ಘಾಟ್ ಅನ್ನೋ ಪ್ರಕೃತಿ ಸೊಬಗಿನ ತಾಣ ಎದಿರಾಗುತ್ತದೆ. ಕಡಿದಾದ ತಿರುವುಗಳನ್ನು ದಾಟಿ ಘಾಟ್ ಹತ್ತುವ ವೇಳೆ ಎತ್ತ ನೋಡಿದರೂ ಸೊಬಗು, ಕಣ್ಣು ಹಾಯಿಸಿದಷ್ಟು ದೂರ ಚೆಲುವಿನ ಸಿರಿ.

ಜಲಧಾರೆಗಳ ಹಿಂಡು:
ಚಾರ್ಮಾಡಿ ಘಾಟ್‌ನುದ್ದಕ್ಕೂ ಹತ್ತಾರು ಜಲಧಾರೆಗಳು ರಸ್ತೆಯ ಇಕ್ಕೆಲಗಳಲ್ಲೇ ಕಾಣಸಿಗುತ್ತವೆ. ಇಲ್ಲಿ ಕೊಂಚ ಹೊತ್ತು ನಿಂತು ದಣಿವಾರಿಸಿ ಮುಂದುವರಿಯಬಹುದು. ಮಲಯಮಾರುತ ಗೆಸ್ಟ್ ಹೌಸ್ ಸಮೀಪವಿರೋ ಅಲೇಖಾನ್ ಫಾಲ್ಸ್ ಜಲಧಾರೆಗಳಲ್ಲೇ ಅತ್ಯಂತ ದೊಡ್ಡದು. ರಸ್ತೆಯ ಅಡಿಭಾಗದಲ್ಲಿ ಭೋರ್ಗರೆದು ಧುಮ್ಮಿಕ್ಕುವ ಜಲಧಾರೆಯ ಸೊಬಗನ್ನು ಸವಿಯಲು ಎರಡು ಕಣ್ಣುಗಳು ಸಾಲದು.

ಎಲ್ಲಿಂದ ಎಷ್ಟು ದೂರ?
ಚಾರ್ಮಾಡಿ ಘಾಟ್ ಬೆಂಗಳೂರಿನಿಂದ 292 ಕಿ.ಮೀ., ದೂರದಲ್ಲಿದೆ. ಚಿಕ್ಕಮಗಳೂರಿನಿಂದ 70 ಕಿ.ಮೀ., ಮೂಡಿಗೆರೆಯಿಂದ 40 ಕಿ.ಮೀ., ಮಂಗಳೂರಿನಿಂದ 81 ಕಿ.ಮಿ., ಉಡುಪಿಯಿಂದ 107 ಕಿ.ಮೀ., ಉಜಿರೆಯಿಂದ 14 ಕಿ.ಮೀ. ದೂರದಲ್ಲಿದೆ. ಕೊಟ್ಟಿಗೆಹಾರ, ಉಜಿರೆ ಹತ್ತಿರದ ಪಟ್ಟಣಗಳು. ಚಾರ್ಮಾಡಿ ಘಾಟ್ ಸಂಪರ್ಕಿಸಲು ಸರಕಾರಿ ಬಸ್ ಸೌಲಭ್ಯವಿದೆ. ಉಜಿರೆ, ಕೊಟ್ಟಿಗೆಹಾರ ಕಡೆಯಿಂದ ಬಾಡಿಗೆ ಜೀಪ್, ಖಾಸಗಿ ಟ್ಯಾಕ್ಸಿ ಸೌಲಭ್ಯವಿದೆ.

ಫುಡ್, ಸ್ಟೇ ವ್ಯವಸ್ಥೆ ಮಾಡಿಕೊಳ್ಳಿ:
ಚಾರ್ಮಾಡಿ ಘಾಟ್‌ನಲ್ಲಿ ಯಾವೊಂದು ಹೋಟೆಲ್, ಅಂಗಡಿ ಸಿಗದ ಕಾರಣ ಆಹಾರ, ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಿ. ಇನ್ನು ಸ್ಟೇ ಮಾಡೋದಾದ್ರೆ ಕೊಟ್ಟಿಗೆಹಾರ, ಉಜಿರೆಯಲ್ಲಿ ಲಾಡ್ಜ್‌ಗಳಿವೆ. ಅಲ್ಲಿ ಸಾಕಷ್ಟು ಸಂಖ್ಯೆಯ ಹೋಟೆಲ್, ಕ್ಯಾಂಟೀನ್‌ಗಳು ಇದ್ದು ಸಮಸ್ಯೆಯಿಲ್ಲ. ಮಲಯ ಮಾರುತ ಗೆಸ್ಟ್ ಹೌಸ್ ಸರಕಾರದ ಇಲಾಖೆಗೊಳಪಟ್ಟಿದ್ದು ಇಲ್ಲಿ ಸ್ಟೇ ಮಾಡಬೇಕಿದ್ದರೆ ಮೊದಲೇ ಬುಕ್ಕಿಂಗ್ ಮಾಡೋದು ಕಡ್ಡಾಯ.

ಕೆಮರಾ ಮತ್ತು ಆರೋಗ್ಯ ಎಚ್ಚರ!
ಮಳೆಗಾಲವಾದ್ದರಿಂದ ಕೆಮರಾ ಎಚ್ಚರಿಕೆಯಲ್ಲಿ ಬಳಸಬೇಕು. ವಿಡಿಯೋ, ಸ್ಟಿಲ್ ಕೆಮರಾ ಕೊಂಡೊಯ್ಯುವಿರಾದಲ್ಲಿ ಅದರ ಸುರಕ್ಷೆಯತ್ತ ಗಮನವಿರಲಿ. ಮಳೆ ಒಂದೇ ಸಮನೆ ಸುರಿಯುವ ಕಾರಣ ಆರೋಗ್ಯದಲ್ಲೂ ಏರುಪೇರಾದೀತು. ಜ್ವರ, ಶೀತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಈ ಬಗ್ಗೆಯೂ ಕಾಳಜಿ ಇರಲಿ.

-ಶಶಿಧರ, ಬೆಳ್ಳಾಯರು

Leave a comment.

Your email address will not be published. Required fields are marked*